ಕಬ್ಬನ್, ಸರ್ ಮಾರ್ಕ್ : 1785-1861. ಮೈಸೂರು ಸಂಸ್ಥಾನದ ಆಡಳಿತವನ್ನು ಬ್ರಿಟಿಷ್ ಸರ್ಕಾರ ವಹಿಸಿಕೊಂಡಿದ್ದ ಕಾಲದಲ್ಲಿ (1831-81) ಆ ಸಂಸ್ಥಾನದ ಕಮಿಷನರ್ ಆಗಿದ್ದವ (1834-61). ಐರಿಷ್ ಸಮುದ್ರದಲ್ಲಿರುವ ಐಲ್ ಆಫ್ ಮ್ಯಾನ್ ದ್ವೀಪದ ಮ್ಯಾಂಕ್ಸ್‌ನಲ್ಲಿ ಪಾದ್ರಿಯೊಬ್ಬನ ಮಗನಾಗಿ 1785 ಸೆಪ್ಟೆಂಬರಿನಲ್ಲಿ ಜನಿಸಿದ. 1800ರಲ್ಲಿ ಭಾರತಕ್ಕೆ ಬಂದ. ಕರ್ನಲ್ ವಿಲ್ಕ್ಸನ ಸೋದರಸಂಬಂಧಿಯಾದ ಈತ ಮದ್ರಾಸ್ ಇನ್ಫೆಂಟ್ರಿಯನ್ನು ಸೇರಿ 1816ರಲ್ಲಿ ಕ್ಯಾಪ್ಟನ್ ಪದವಿಗೇರಿದ. 1817-18ರಲ್ಲಿ ಪಿಂಡಾರಿಗಳ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಪಾತ್ರವಹಿಸಿದ್ದು, 1818ರಲ್ಲಿ ಲೆಫ್ಟಿನೆಂಟ್ ಕರ್ನಲ್ ಆದ. ಮೈಸೂರಿನ ವಿದ್ಯಮಾನಗಳ ಬಗ್ಗೆ ವಿಚಾರಣೆ ನಡೆಸಲು ಲಾರ್ಡ್ ವಿಲಿಯಂ ಬೆಂಟಿಂಕ್ ಏರ್ಪಡಿಸಿದ್ದ ಸಮಿತಿಯಲ್ಲಿ (1831) ಈತನೂ ಒಬ್ಬ ಸದಸ್ಯ, ಮುಮ್ಮಡಿ ಕೃಷ್ಣರಾಜಒಡೆಯರಿಂದ ವಶಪಡಿಸಿಕೊಂಡ ಸಂಸ್ಥಾನಾಡಳಿತವನ್ನು ನಿರ್ವಹಿಸುವುದಕ್ಕಾಗೀ ಈತ ಕಿರಿಯ ಕಮಿಷನರ್ ಅಧಿಕಾರಿಯಾಗಿದ್ದು 1834ರಲ್ಲಿ ಅದರ ಏಕೈಕ ಕಮಿಷನರ್ ಆಗಿ ನೇಮಕವಾದ. 27 ವರ್ಷಗಳ ಕಾಲ ಈ ಹುದ್ದೆಯಲ್ಲಿದ್ದ ಈತ ಸಂಸ್ಥಾನದ ಆಡಳಿತ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಬಹಳ ಮಟ್ಟಿಗೆ ಸುಧಾರಿಸಿದ. ಸಂಸ್ಥಾನವನ್ನು ಬೆಂಗಳೂರು, ಚಿತ್ರದುರ್ಗ, ಅಷ್ಟಗ್ರಾಮ ಮತ್ತು ನಗರಗಳೆಂಬ ನಾಲ್ಕು ವಿಭಾಗಗಳನ್ನಾಗಿ ಮಾಡಿ ಅವಕ್ಕೆ ಮೇಲಧಿಕಾರಿ ಗಳನ್ನು ನೇಮಿಸಿದ. ಪ್ರತಿಯೊಂದು ತಾಲ್ಲೂಕಿಗೂ ಒಬ್ಬ ಅಮಲ್ದಾರನನ್ನೂ ಪ್ರತಿ ಹೋಬಳಿಗೂ ಒಬ್ಬ ಶೇಕ್ದಾರನನ್ನೂ ನೇಮಿಸಲಾಯಿತು. ತನ್ನ ಆಪ್ತಕಾರ್ಯದರ್ಶಿಯನ್ನೆ ಪ್ರಮುಖ ಕಾರ್ಯದರ್ಶಿಯನ್ನಾಗಿ ನೇಮಿಸಿ ಆಡಳಿತವನ್ನು ಬಿಗಿಗೊಳಿಸಿದ್ದಲ್ಲದೆ ಸರ್ಕಾರದ ಚಟುವಟಿಕೆಗಳನ್ನು ಜನರಿಗೆ ತಿಳಿಯಪಡಿಸುವ ವ್ಯವಸ್ಥೆಯನ್ನು ವಿಸ್ತರಿಸಿದ. 85 ತಾಲ್ಲೂಕು ನ್ಯಾಯಾಲಯಗಳು, 8 ಪ್ರಧಾನ ಸದರ್ ಮುನ್ಸಿಫ್ ನ್ಯಾಯಾಲಯಗಳು, 3 ಸೂಪರಿಂಟೆಂಡೆಂಟ್ ನ್ಯಾಯಾಲಯಗಳು ಮತ್ತು ಮೂವರು ನ್ಯಾಯಾಧೀಶರಿರುವ ಒಂದು ಹುಜೂರ್ ಅದಾಲತ್ ನ್ಯಾಯಾಲಯ ಇರುವಂತೆ ನ್ಯಾಯಾಂಗವನ್ನು ಪುನವರ್ಯ್‌ವಸ್ಥೆಗೊಳಿಸಿ ದೃಢಗೊಳಿಸಿದ. ಒಟ್ಟು 2560 ಕಿಮೀ ಉದ್ದದ ರಸ್ತೆಗಳೂ ಅನೇಕ ಸೇತುವೆಗಳೂ ಈತನ ಕಾಲದಲ್ಲಿ ರಚಿತವಾಗಿ ಬೆಂಗಳೂರಿಗೂ ಜಿಲ್ಲಾ ಕೇಂದ್ರಗಳಿಗೂ ಸಂಪರ್ಕ ಸುಲಭವಾಯಿತು. ಜಾಲಾರ್ ಪೇಟೆ-ಬೆಂಗಳೂರು ರೈಲುಮಾರ್ಗ ನಿರ್ಮಾಣವಾದದ್ದು ಈತನ ಕಾಲದಲ್ಲೇ (1859). ಸಂಸ್ಥಾನದ ಆದಾಯವೂ ಹೆಚ್ಚಿತು. 1834ರಲ್ಲಿ 68ಲಕ್ಷ ರೂ ಇದ್ದ ವಾರ್ಷಿಕ ಆದಾಯ 1855-56ರಲ್ಲಿ 85 ಲಕ್ಷ ರೂ.ಗಳಿಗೆ ಏರಿತು. ಸರ್ಕಾರದ ಎಲ್ಲ ಸಾಲಗಳನ್ನೂ ತೀರಿಸಲು ಸಾಧ್ಯವಾಗಿ, ಹಣಕಾಸಿನ ಸ್ಥಿತಿ ಸುಧಾರಿಸಲು ಸಾಧ್ಯವಾದದ್ದು ಈತನ ದಕ್ಷ ಆಡಳಿತದಿಂದ.

ಕಬ್ಬನ್ ಕೊನೆಯ ತನಕವೂ ಅವಿವಾಹಿತನಾಗಿಯೇ ಇದ್ದ. 60 ವರ್ಷಗಳ ಕಾಲ ಭಾರತದಲ್ಲಿ ಸೇವೆ ಸಲ್ಲಿಸಿದ. ಈತ ಈ ಕಾಲದಲ್ಲಿ ಒಮ್ಮೆಯೂ ಭಾರತವನ್ನು ಬಿಟ್ಟುಹೋಗಲಿಲ್ಲ. 1861ರಲ್ಲಿ ಅನಾರೋಗ್ಯದ ನಿಮಿತ್ತ ಕೆಲಸಕ್ಕೆ ರಾಜೀನಾಮೆ ನೀಡಿ ಸ್ವದೇಶಕ್ಕೆ ಹಿಂದಿರುಗುತ್ತಿದ್ದಾಗ ಹಾದಿಯಲ್ಲಿ ಸೂಯೆeóïನಲ್ಲಿ ತೀರಿಕೊಂಡ. ಇವನ ಪಾರ್ಥಿವ ಶರೀರವನ್ನು ಐಲ್ ಆಫ್ ಮ್ಯಾನ್ಗೆ ಕೊಂಡೊಯ್ದು ಅಲ್ಲಿ ಸಮಾಧಿ ಮಾಡಲಾಯಿತು. ಹಲವು ಶತಮಾನಗಳಲ್ಲಿ ಆ ದ್ವೀಪದಲ್ಲಿ ಹುಟ್ಟಿದವರ ಪೈಕಿ ಅತಿ ದೊಡ್ಡ ವ್ಯಕ್ತಿ ಈತನೆಂದು ಅಲ್ಲಿಯ ಜನ ಘೋಷಿಸಿದರು.

ಕಮೀಷನರ್ ಆಗಿ ಕೆಲಸ ಮಾಡುತ್ತಿದ್ದಾಗ 1852ರಲ್ಲಿ ಈತನಿಗೆ ಸೈನ್ಯದ ಹುದ್ದೆಯಲ್ಲಿ ಲೆಫ್ಟಿನೆಂಟ್ ಜನರಲ್ ಆಗಿ ಬಡ್ತಿ ಸಿಕ್ಕಿತ್ತು. ಬ್ರಿಟಿಷ್ ರಾಣಿ ಈತನಿಗೆ 1856ರಲ್ಲಿ ಸಿ.ಬಿ. ಪ್ರಶಸ್ತಿಯನ್ನೂ 1859ರಲ್ಲಿ ಕೆ.ಸಿ.ಬಿ ಪ್ರಶಸ್ತಿಯನ್ನೂ ನೀಡಿದಳು.       (ಎಸ್.ಎನ್.ಕೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ